ಕೋಷಿ, ಅಗಸ್ಟಿನ್ ಲೂಯಿ
1789-1857. ಫ್ರಾನ್ಸಿನ ಪ್ರಥಮ ಶ್ರೇಣಿಯ ಗಣಿತ ಹಾಗೂ ಭೌತವಿಜ್ಞಾನಿ, ಜನನ ಪ್ಯಾರಿಸಿನಲ್ಲಿ 1789ರ ಆಗಸ್ಟ್ 21ರಂದು. ಅಲ್ಲಿನ ಪ್ರಸಿದ್ಧ ವಿದ್ಯಾಸಂಸ್ಥೆಗಳಾದ ಇಕೊಲೆ ಪಾಲಿಟೆಕ್ನಿಕ್ ಮತ್ತು ಇಕೊಲೆಡ್ ಪಾಂಟ್ಸ್‍ಎಟ್ ಚೂಸಿಗಳಲ್ಲಿ ವಿದ್ಯಾಭ್ಯಾಸ ಪಡೆದು ಅನಂತರ ಸ್ವಲ್ಪಕಾಲ ಎಂಜಿನಿಯರಾಗಿ ಕೆಲಸಮಾಡಿದ. ಆದರೆ ತೀವ್ರ ಅಸ್ವಸ್ಥತೆಯ ಕಾರಣ 1813ರಲ್ಲಿ ಈ ಕೆಲಸವನ್ನು ಬಿಟ್ಟು ಮುಂದೆ ಪ್ರಸಿದ್ಧ ಗಣಿತಜ್ಞರಾದ ಲಾಪ್ಲಾಸ್ ಮತ್ತು ಲಾಗ್ರಾಂಜ್ ಇವರ ಸಲಹೆಯ ಪ್ರಕಾರ ಗಣಿತದ ಅಧ್ಯಯನವನ್ನು ಮುಂದುವರಿಸಿ ಅದರಲ್ಲಿಯೇ ಮಗ್ನನಾದ. 1816ರಲ್ಲಿ ತನ್ನ ಹಳೆಯ ವಿದ್ಯಾಸಂಸ್ಥೆಯಾದ ಇಕೊಲೆ ಪಾಲಿಟೆಕ್ನಿಕ್ ಪ್ರಾಧ್ಯಾಪಕನಾಗಿ ನೇಮಿಸಲ್ಪಟ್ಟ. ಆದರೆ ದೇಶದ ದೊರೆಯಾದ ಲೂಯಿ ಫಿಲಿಪನಿಗೆ ನಿಷ್ಠೆ ವ್ಯಕ್ತಪಡಿಸಲು ತಯಾರಿಲ್ಲದ ಕಾರಣ ಕೋಷಿ ಈ ಹುದ್ದೆಯನ್ನು ತ್ಯಜಿಸಬೇಕಾಯಿತು. ಒಂದೆರಡು ವರ್ಷಗಳ ಕಾಲ ಇಟಲಿ ದೇಶದ ಟ್ಯೂರಿನ್ ನಗರದಲ್ಲಿ ಪ್ರಾಧ್ಯಾಪಕನಾಗಿದ್ದ. 1832ರಲ್ಲಿ ಮರಳಿ ಇಕೊಲೆ ಪಾಲಿಟೆಕ್ನಿಕ್ನಲ್ಲಿಯೇ ಪ್ರಾಧ್ಯಾಪಕನಾಗಿ ನೇಮಕಗೊಂಡ. ಈ ಹಿಂದೆ ಇಕೊಲೆಯಲ್ಲಿ ಪ್ರಾಧ್ಯಾಪಕನಾಗಿದ್ದಾಗಲೇ ಕೋಷಿ ಫ್ರೆಂಚ್ ವಿಜ್ಞಾನ ಅಕಾಡಮಿಗೆ ಸದಸ್ಯನಾಗಿ ಚುನಾಯಿತನಾಗಿದ್ದ. ಗಣಿತ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ಕೋಷಿಯ ಸಾಧನೆಗಳನ್ನು ಗಮನಿಸಿ 1832ರಲ್ಲಿ ಇಂಗ್ಲೆಂಡಿನ ಉಚ್ಚ ವಿಜ್ಞಾನಸಂಸ್ಥೆಯಾದ ರಾಯಲ್ ಸೊಸೈಟಿ ಇವನನ್ನು ವಿದೇಶಿ ಸದಸ್ಯನನ್ನಾಗಿ ಚುನಾಯಿಸಿ ಗೌರವಿಸಿತು.

	ಗಣಿತ ಹಾಗೂ ಭೌತವಿಜ್ಞಾನ ಕ್ಷೇತ್ರಗಳಲ್ಲಿ ಕೋಷಿ ಅನೇಕ ಮೂಲಭೂತ ಸಂಶೋಧನೆಗಳನ್ನು ಕೈಗೊಂಡು ಕೆಲವು ಹೊಸ ಸಿದ್ಧಾಂತಗಳನ್ನು ನಿರೂಪಿಸಿದ್ದಾನೆ. ಮೂರು ದತ್ತವೃತ್ತಗಳನ್ನು ಸ್ಪರ್ಶಿಸುವ ವೃತ್ತದ ರಚನೆಗೆ ಸಂಬಂಧಿಸಿದ ಅಪಲೋನಿಯಸ್ ಸಮಸ್ಯೆಗೆ ಕೋಷಿ ಸರಿಯಾದ ಪರಿಹಾರವನ್ನು ಕಂಡುಹಿಡಿದ(1805). ಗಣಿತದ ಅವಕಲನ ಭಾಗದಲ್ಲಿ ಬರುವ ಟೇಲರ್ ಪ್ರಮೇಯವನ್ನು ಮೊಟ್ಟ ಮೊದಲಿಗೆ ಅತಿ ನಿಷ್ಕøಷ್ಟವಾಗಿ ಸಾಧಿಸಿದ ಕೀರ್ತಿ ಈತನದು. ಅನ್ವಯ ಗಣಿತ ಹಾಗೂ ಸೈದ್ಧಾಂತಿಕ ಭೌತವಿಜ್ಞಾನದಲ್ಲಿ ಅತ್ಯವಶ್ಯವಾಗಿ ಉಪಯೋಗಿಸುವ ಸಂಕೀರ್ಣಚರ ಪ್ರಮಾಣಗಳ ಉತ್ಪನ್ನಕ್ಕೆ ಸಂಬಂಧಿಸಿದ ಗಣಿತಭಾಗವನ್ನು ನಿರ್ಮಿಸಿದವ ಕೋಷಿಯೇ. ಅದೇ ರೀತಿ ಉತ್ಪನ್ನಗಳ ಸಿದ್ಧಾಂತ (ಥಿಯೊರಿ ಆಫ್ ಫಂಕ್ಷನ್), ಪರ್‍ಮ್ಯುಟೇಷನ್  ಗ್ರೂಪಿಗೆ ಸಂಬಂಧಿಸಿದ ಸಿದ್ಧಾಂತ ಇವನ್ನು ಕೂಡ ಕೋಷಿಯೇ ನಿರ್ಮಿಸಿದ ಎನ್ನಬಹುದು. ಇದಲ್ಲದೆ ಸಂಭಾವ್ಯತೆ (ಪ್ರಾಬೆಬಿಲಿಟಿ) ಮತ್ತು ವ್ಯತ್ಯಸ್ತಿಕೆಗೆ (ಎರ್ರರ್) ಸಂಬಂಧಿಸಿದ ಅವಕಲನಶಾಸ್ತ್ರಭಾಗಗಳ ಕ್ಷೇತ್ರಗಳಲ್ಲಿಯೂ ಕೋಷಿಯ ಸಂಶೋಧನೆ ಗಮನಾರ್ಹ ಗಾತ್ರದಲ್ಲಿದೆ.

	ಪರಿಮಿತಿ ಮತ್ತು ಅವಿಚ್ಛಿನ್ನತೆ ಪರಿಕಲ್ಪನೆಗಳ ಆಧಾರದ ಮೇಲೆ ಸರಿಯಾದ ರೀತಿಯಲ್ಲಿ ಅವಕಲನಶಾಸ್ತ್ರದ ಮೂಲತತ್ವಗಳನ್ನು ನಿರೂಪಿಸಿ ಅವುಗಳ ವ್ಯಾಖ್ಯೆಯನ್ನು ಬಹುಮಟ್ಟಿಗೆ ಸ್ಪಷ್ಟೀಕರಿಸಿದ್ದು ಗಣಿತಶಾಸ್ತ್ರದಲ್ಲಿ ಕೋಷಿಯ ಮುಖ್ಯ ಸಾಧನೆ. ಗಣಿತಶಾಸ್ತ್ರದಲ್ಲಿ ವಾದ ಸರಣಿಯನ್ನು ಬೆಳೆಸುವಾಗ, ಅದು ಅತಿ ಸ್ಪಷ್ಟವಾಗಿಯೂ ಅತಿ ನಿಷ್ಕøಷ್ಟವಾಗಿಯೂ ಇರಬೇಕೆಂಬುದೇ ಇವನ ಅಭಿಪ್ರಾಯವಾಗಿತ್ತು. ಈ ರೀತಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇ ಅಲ್ಲದೆ ಅದನ್ನು ಕಾರ್ಯತಃ ಸಾಧಿಸಿಯೂ ತೋರಿಸಿದ. ಅವನ ಉತ್ಕøಷ್ಟ ಗ್ರಂಥಗಳಾದ ಕೋರ್ಸ್ ಡಿ ಅನಾಲಿಸ್, ಲೆ ಕ್ಯಾಲ್‍ಕ್ಯೂಲ್ ಇನ್ ಫಿನಿಟೆಸಿಮಲ್ ಇತ್ಯಾದಿಗಳಲ್ಲಿ ಈ ಸಾಧನೆಯನ್ನು ಕಾಣಬಹುದು. 

	ಭೌತವಿಜ್ಞಾನ ಕ್ಷೇತ್ರದಲ್ಲಿ ಸಹ ಇವನ ಸಂಶೋಧನೆಗಳು ವ್ಯಾಪಕ ಮತ್ತು ಉತ್ಕøಷ್ಟ ಮಟ್ಟದವು. ಅಲೆ ಪ್ರಸಾರಕ್ಕೆ ಸಂಬಂಧಿಸಿದಂತೆ ಒಂದು ಪ್ರೌಢ ಪ್ರಬಂಧವನ್ನು 1816ರಲ್ಲಿಯೇ ಪ್ರಕಟಿಸಿದ್ದ. ಇದಕ್ಕಾಗಿ ಇವನಿಗೆ ಇನ್ಸ್‍ಟಿಟ್ಯೂಟ್ ಡೆ ಫ್ರಾನ್ಸ್ ಸಂಸ್ಥೆಯಿಂದ ವಿಶೆಷ ರೀತಿಯ ಮನ್ನಣೆ ದೊರಕಿತು. ಈಥರಿನ ಗುಣ ಲಕ್ಷಣಗಳ ಬಗ್ಗೆ ಗಣತೀಯ ರೀತಿಯಲ್ಲಿ ಸರಿಯಾದ ಆಧಾರವನ್ನು ಒದಗಿಸಿದ.  ಪಾರಮಾಧ್ಯಮದಿಂದ ಆಗುವ ಸಂಕೀರ್ಣ ಬೆಳಕಿನ ಕಿರಣಗಳ ವಿಂಗಡಣೆಗೆ ಸಂಬಂಧಿಸಿದಂತೆ ಕೋಷಿ ಎಂಬ ಸೂತ್ರವನ್ನು ನಿರೂಪಿಸಿದ.

ಇದನ್ನು ರೋಹಿತದ ಕೆಲವು ಮಿತಭಾಗಗಳಿಗೆ ಅನ್ವಯಿಸಿದಾಗ, ಅನೇಕ ಪದಾರ್ಥಗಳಿಂದ ಆಗುವ ಕಿಣರ ವಿಂಗಡಣೆಯ ಫಲಿತಾಂಶಗಳನ್ನು ಸಮರ್ಪಕವಾದ ರೀತಿಯಲ್ಲಿ ಇದು ವಿವರಿಸುತ್ತದೆ. ಪುಟಿತತೆಗೆ (ಇಲಾಸ್ಟಿಸಿಟಿ) ಸಂಬಂಧಿಸಿದ ಭೌತವಿಜ್ಞಾನ ಭಾಗದಲ್ಲಿ ಅನೇಕ ರೀತಿಯ ಸಂಶೋಧನೆಗಳನ್ನು ಕೈಗೊಂಡು ಕೋಷಿ ಅನೇಕ ಮುಖ್ಯ ತೀರ್ಮಾನಗಳನ್ನು ಪಡೆದ. ಈ ಕ್ಷೇತ್ರದಲ್ಲಿ ಒತ್ತಾಯಕ್ಕೆ (ಸ್ಟ್ರೆಸ್) ಸಂಬಂಧಿಸಿದ ವಾದವನ್ನು ನಿರ್ಮಿಸಿ ಪುಟಿತ ಘನಪದಾರ್ಥಗಳ ಬಗ್ಗೆ ನೇಪಿಯರ್ ಪ್ರತಿಪಾದಿಸಿದ್ದ ಸಿದ್ಧಾಂತವನ್ನು ಮುಂದುವರಿಸಿ ಹೂಕ್‍ನ ನಿಯಮವನ್ನು ಸಾರ್ವತ್ರೀಕರಿಸಿದ. 15 ಪುಟಿತ ನಿಯತಾಂಕಕಗಳನ್ನೊಳಗೊಂಡ ಈ ಸಿದ್ಧಾಂತ ಎಲ್ಲ ವಿಧವಾದ ಸ್ಫಟಿಕೀಯ ಪದಾರ್ಥಗಳಿಗೂ ಅನ್ವಯ ಯೋಗ್ಯ ಎಂದು ಕೋಷಿ ಭಾವಿಸಿದ್ದ. ಕೋಷಿ ಮಡಿದದ್ದು ಸಿಯೇನಿನಲ್ಲಿ 1857ರ ಮೇ 23ರಂದು. 										  (ಕೆ.ಎಸ್.ಆರ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ